ಟ್ಯಾಕಿನಿಡೀ
ಡಿಪ್ಟಿರ ಗಣಕ್ಕೆ ಸೇರಿದ ಒಂದು ಕೀಟ ಕುಟುಂಬ. ಈ ಗಣದಲ್ಲೇ ಇದು ಅತ್ಯಂತ ದೊಡ್ಡದು; ಸುಮಾರು 300 ಜಾತಿಗಳನ್ನೂ 5,000 ಪ್ರಭೇದಗಳನ್ನೂ ಒಳಗೊಂಡಿದೆ. ಇವುಗಳಲ್ಲಿ ಬಹುಪಾಲು ಪ್ರಭೇದಗಳ ಡಿಂಬಗಳು ಸಾಮಾನ್ಯವಾಗಿ ಬೇರೆ ಕೀಟಗಳ ವಯಸ್ಕ ಅಥವಾ ಡಿಂಬಗಳ ಪರಾವಲಂಬಿಗಳಾಗಿ ಜೀವಿಸುವುವು. ಸಾಮಾನ್ಯವಾಗಿ ಲೆಪಿಡಾಪ್ಟರ, ಹೈಮಿನಾಪ್ಟರ ಮತ್ತು ಕೋಲಿಯಾಪ್ಟಿರ ಗಣಗಳ ಡಿಂಬಗಳು ಮತ್ತು ಕೋಲಿಯಾಪ್ಟಿರ, ಆರ್ಥಾಪ್ಟಿರ ಮತ್ತು ಹೆಮಿಪ್ಟಿರ ಗಣಗಳ ಪೌಢ ಕೀಟಗಳು ಇವುಗಳ ದಾಳಿಗೆ ಒಳಗಾಗುತ್ತವೆ. ಸಣ್ಣ ಇಲ್ಲವೆ ಮಧ್ಯಮಗಾತ್ರದ ಕೀಟಗಳಿವು. ದೇಹ ಸಾಧಾರಣವಾಗಿ ದಷ್ಟಪುಷ್ಟವಾಗಿದೆ. ಬಣ್ಣ ಕಪ್ಪು. ಬೂದಿ ಇಲ್ಲವೆ ಕಂದು. ಉದರದ ಮೇಲೆ ಎದ್ದು ಕಾಣುವಂಥ ಬಿರುಗೂದಲುಗಳುಂಟು. ತಲೆ ದೊಡ್ಡದು. ಆಂಟೆನಾಗಳು ಎರಡು ಕಣ್ಣುಗಳ ನಡುವೆ ಅಥವಾ ಮೇಲ್ಫಾಗದಲ್ಲಿ ಮೂಡಿವೆ. ರೆಕ್ಕೆಗಳು ದೊಡ್ಡವು.

	ಟ್ಯಾಕಿನಿಡೀ ಕೀಟಗಳಲ್ಲಿ ಫಲವಂತಿಕೆ ಅತಿ ಹೆಚ್ಚು. ಒಂದು ಬಾರಿಗೆ ಒಂದು ಹೆಣ್ಣುಕೀಟ ನೂರಾರು ಅಥವಾ ಸಾವಿರಾರು ಮೊಟ್ಟೆಗಳನ್ನಿಡುತ್ತವೆ. ಡಿಂಬಗಳು ಹೆಣ್ಣುಕೀಟದಿಂದ ನೇರವಾಗಿ ಹುಟ್ಟುವ ಸಂದರ್ಭಗಳೂ ಉಂಟು. ಹೆಣ್ಣುಕೀಟ ತಾನು ಉತ್ಪತ್ತಿಮಾಡುವ ಮೊಟ್ಟೆ ಅಥವಾ ಡಿಂಬ ಪೋಷಕಜೀವಿಯ ದೇಹವನ್ನು ತಲುಪುವಂತೆ ಮಾಡಲು ಹಲವಾರು ವಿಧಾನಗಳನ್ನು ಅನುಸರಿಸುತ್ತದೆ. 

1 ಮೊಟ್ಟೆಗಳನ್ನು ಪೋಷಕಜೀವಿಯ ಡಿಂಬದ ಮೇಲೆ ಇಡಬಹುದು. ಮೊಟ್ಟೆಗಳು ಒಡೆದು ಹೊರಬರುವ ಡಿಂಬಗಳು ಪೋಷಕದ ದೇಹವನ್ನು ಕೊರೆದುಕೊಂಡು ಒಳಸೇರುತ್ತವೆ. 

2 ಪೋಷಕಜೀವಿಯ ಡಿಂಬವು ತಿನ್ನುವ ಆಹಾರಗಿಡಗಳ ಎಲೆಗಳ ಮೇಲೆ ಮೊಟ್ಟೆಗಳನ್ನಿಡಬಹುದು. ಪೋಷಕಜೀವಿ ಎಲೆಗಳನ್ನು ತಿಂದಾಗ ಮೊಟ್ಟೆಗಳು ಅದರ ಜೀರ್ಣನಾಳ ಸೇರಿ ಒಡೆದು ಡಿಂಬಗಳು ಹೊರಬರುವುವು. ಇವು ಜೀರ್ಣನಾಳದ ಗೋಡೆಯನ್ನು ಕೊರೆದುಕೊಂಡು ಜೀರ್ಣನಾಳದ ಗೋಡೆಗೂ ಮತ್ತು ದೇಹದ ಗೋಡೆಗೂ ನಡುವೆ ಇರುವ ದೇಹಾವಕಾಶದಲ್ಲಿ ನೆಲಸುತ್ತವೆ. 

3 ಪೋಷಕ ಜೀವಿಯ ಚರ್ಮದ ಮೇಲೆಯೇ ನೇರವಾಗಿ ಡಿಂಬಗಳನ್ನಿಡಬಹುದು. ಅಲ್ಲಿಂದ ಇವು ದೇಹದ ಗೋಡೆಯನ್ನು ಕೊರೆದುಕೊಂಡು ಒಳಹೋಗುತ್ತವೆ. 

4 ಪ್ರಾಯಸ್ಥ ಹೆಣ್ಣುಕೀಟ ಮೊದಲು ಪೋಷಕ ಜೀವಿಯ ಚರ್ಮದಲ್ಲಿ ಗಾಯವುಂಟುಮಾಡಿ ಡಿಂಬಗಳನ್ನು ನೇರವಾಗಿ ಇಡುವುದೂ ಉಂಟು. ಆ ಗಾಯದ ಮೂಲಕ ಡಿಂಬಗಳು ಪೋಷಕಜೀವಿಯ ದೇಹವನ್ನು ಸೇರುತ್ತವೆ. 

5 ಸಸ್ಯಗಳ ಮೇಲೆ, ಸಣ್ಣ ಬಟ್ಟಲಿನಾಕಾರದ ಪೊರೆಯಲ್ಲಿ ಡಿಂಬಗಳನ್ನಿಡುವುದುಂಟು. ಪೋಷಕ ಜೀವಿ ಇಂಥ ಬಟ್ಟಲಿನ ಬಳಿ ಬಂದಾಗ ಡಿಂಬಗಳು ತಮ್ಮ ಬಾಯ ಬಳಿಯಿರುವ ಕೊಂಡಿಗಳ ಸಹಾಯದಿಂದ ಪೋಷಕ ಜೀವಿಯ ದೇಹಕ್ಕೆ ತಗುಲಿಕೊಂಡು ಅನಂತರ ದೇಹದ ಗೋಡೆಯ ಮೂಲಕ ಒಳಹೊಗುವುವು. ಡಿಂಬಗಳ ದೇಹದ ಆಕಾರ ಅಂಡದಂತೆ ಇಲ್ಲವೆ ಉರುಳೆಯಂತೆ. ಇದರ ಮುಂದಣ ತುದಿ ಚೂಪಾಗಿದ್ದು. ಹಿಂದಣ ತುದಿಯ ಮೇಲೆ ಒಂದು ಜೊತೆ ಪ್ರಮುಖವಾದ ಶ್ವಾಸರಂಧ್ರ ಅಥವಾ ಸ್ಪೈರಕಲ್‍ಗಳಿರುತ್ತವೆ. ಡಿಂಬಗಳು ಪೂರ್ಣವಾಗಿ ಬೆಳೆದ ಅನಂತರ ಪೋಷಕ ಜೀವಿಯ ದೇಹವನ್ನು ಕೊರೆದುಕೊಂಡು ಹೊರಬಂದು ಭೂಮಿಯ ಮೇಲೆ, ಸತ್ತ ಪೋಷಕ ಜೀವಿಯ ದೇಹದ ಭಾಗಗಳಿರುವ ಸ್ಥಳದಲ್ಲೇ ಕೋಶಾವಸ್ಥೆಯಲ್ಲಿ ತೊಡಗುವುವು.

	ಪೋಷಕ ಜೀವಿಯ ದೇಹದೊಳಗಿನ ಡಿಂಬದ ಜೀವನಚಕ್ರ ವೈವಿಧ್ಯದಿಂದ ಕೂಡಿದೆ. ಪ್ರಭೇದದಿಂದ ಪ್ರಭೇದಕ್ಕೆ ವ್ಯತ್ಯಾಸವನ್ನೂ ಕಾಣಬಹುದು. ಯಾವುದಾದರೊಂದು ಹಂತದಲ್ಲಿ ಇದು ಒಂದು ಕ್ಯುಟಿಕಲ್ ಕವಚವನ್ನು ರಚಿಸಿಕೊಂಡು ಹೊರಗಿನ ಗಾಳಿಯನ್ನು ಉಸಿರಾಡುತ್ತದೆ. ಪೋಷಕ ಜೀವಿಯ ದೇಹದೊಳಕ್ಕೆ ಬರಲು ಕೊರೆದಿದ್ದ ರಂಧ್ರಗಳ ಮೂಲಕ ಹೊರಗಿನ ಗಾಳಿಯನ್ನು ಪಡೆಯಬಹುದು ಅಥವಾ ಡಿಂಬ ಏನಾದರೂ ಪೋಷಕಜೀವಿಯ ದೇಹದೊಳಗೆ ಪ್ರವೇಶಿಸಿ ತಕ್ಷಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಂಥದಾದರೆ. ಅದು ಪೋಷಕ ಜೀವಿಯ ದೇಹದ ಗೋಡೆಯ ಮೂಲಕವಾಗಲೀ ಯಾವುದಾದರೂ ಶ್ವಾಸನಾಳದ ಮೂಲಕವಾಗಲೀ ಹೊರಪ್ರಪಂಚದೊಡನೆ ಸಂಪರ್ಕ ಕಲ್ಪಿಸಿಕೊಂಡು ಗಾಳಿಯನ್ನು ಪಡೆಯುತ್ತದೆ.

	ಪೌರಸ್ತ್ಯ ವಲಯದಲ್ಲಿ ಕಾರ್ಸೀಲಿಯ ಕೊಕಿಯಾನ ಎಂಬ ಪ್ರಭೇಧ ವಿಶೇಷವಾಗಿ ಹರಡಿದೆ. ವಯಸ್ಕ ಕೀಟದ ಜೀವಿತಾವಧಿ ಸುಮಾರು 33ದಿನ. ಲೆಪಿಡಾಪ್ಟಿರ ಗಣಕ್ಕೆ ಸೇರಿದ ಅನೇಕ ಕೀಟಗಳ ಡಿಂಬಗಳ ದೇಹದ ಮೇಲೆ ಈ ಪ್ರಭೇದದ ಹೆಣ್ಣು ಕೀಟಗಳು ತಮ್ಮ ಡಿಂಬಗಳನ್ನು ನೇರವಾಗಿ ಇಡುತ್ತವೆ. ಯುಟಕೈನ ಸಿವಿಲಾಯ್‍ಡಿಸ್ ಎಂಬ ಪ್ರಭೇಧ ಭಾರತಾದ್ಯಂತ ಕಾಣಸಿಗುತ್ತದೆ. ಇದು ಮೊಟ್ಟೆಯಿಡುವ ಪ್ರಭೇದ. ಇದರ ಜೀವನ ಚಕ್ರದ ಅವಧಿ ಸುಮಾರು 3 ವಾರ. ಹೆಚ್ಚು ಪರಿಚಿತ ಪ್ರಭೇದಗಳ ಪೈಕಿ ಟೈಕೋಮಿಯ ರಿಮೋಟ ಎಂಬುದು ಪೌರಸ್ತ್ಯ ವಲಯದಲ್ಲೂ ಸ್ಟುರ್ಮಿಯ ಇನ್ಕಾಂಸ್ಪಿಕ್ಯುಯೆಲ ಎಂಬುದು ಭಾರತದಲ್ಲೂ ವಿಶೇಷವಾಗಿ ಹರಡಿಕೊಂಡಿವೆ. ಇವೆರಡರಲ್ಲೂ ಜೀವನಚಕ್ರದ ಅವಧಿ 3 ವಾರ. ವಯಸ್ಕ ಕೀಟ ಸುಮಾರು 10 ದಿನ ಬದುಕಿರುತ್ತದೆ. ಹೆಣ್ಣುಕೀಟ ಸುಮಾರು 50ಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತದೆ. ಸ್ಟುರ್ಮಿಯ ಬಗೆಯದು ಭಾರತಾದ್ಯಂತ ತೇಗದ ಮರದ ಎಲೆಗಳನ್ನು ತಿಂದು ಹಾಳುಮಾಡುವ ಹೈಬ್ಲೇಯಿಯ ಪ್ಯೂರ (ಲೆಪಿಡಾಪ್ಟರ ಗಣ) ಎಂಬ ಕೀಟದ ಮೇಲೆ ಪರಾವಲಂಬಿಯಾಗಿ ಜೀವಿಸುವುದು. ಇದು ಹೈಬ್ಲೇಯಿಯವನ್ನು ಹತೋಟಿಯಲ್ಲಿಡುವ ಒಂದು ಸಾಧನವೂ ಆಗಿದೆ. ಫೋರೊಸೀರ ಎಂಬುದು ಜಿಪ್ಸಿ ಮತ್ತು ಕಂದುಬಾಲದ ಪತಂಗಗಳ ಪರಾವಲಂಬಿಯಾಗಿದೆ. ಉಳಿದವುಗಳಲ್ಲಿ ಮುಖ್ಯವಾದುವು ವಿಂತೀಮಿಯ ಕ್ವಾಡ್ರಿಪಸ್ಟ್ಯುಲೇಟ, ಆರ್ಕೈಟಾಸ್ ಪೈಲಿವೆಂಟ್ರಿಸ್ ಮತ್ತು ಡೆಕ್ಸಿಯ ವೆಂಟ್ರ್ಯಾಲಿಸ್.
(ಕೆ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ